ಮುಕ್ತಾಬಾಯಿ 2	

	1279-1298. ಆತ್ಮಜ್ಞಾನಿ ಕವಯಿತ್ರಿ ಹಾಗೂ ಯೋಗಿನಿ. ಸಂತಜ್ಞಾನೇಶ್ವರನ ತಂಗಿ ಅಣ್ಣ ನಿವೃತ್ತಿನಾಥನಿಂದ ಅಧ್ಯಾತ್ಮ ದೀಕ್ಷೆ ಪಡೆದು ಅನೇಕ ಅಭಂಗಗಳನ್ನು ರಚಿಸಿದ್ದಾಳೆ. ಚಾಂಗದೇವನಿಗೆ ಉಪದೇಶ ನೀಡಿ, ಆತನನ್ನು ಅಧ್ಯಾತ್ಮ ಮಾರ್ಗಕ್ಕೆ ಹಚ್ಚಿದವಳು ಈಕೆಯೇ ಎನ್ನಲಾಗಿದೆ. ಸಮಾಧಿ ಕಾಲದಲ್ಲಿ ಸಿಡಿಲಿನ ಗುಡುಗಾಗಿ ಮಿಂಚಿನಲ್ಲಿ ಮಾಯವಾದಳೆಂದು ಹೇಳುವ ಆಖ್ಯಾಯಿಕೆ ಇದೆ. ಈಕೆಯ ಅಭಂಗಗಳು ಅನುಭವಪೂರ್ಣವಾದವು.

	ಈ ಭವನದಿಯ ಸೆಳವೇ ಜೋರಾಗಿರುವುದರಿಂದ ಚೆನ್ನಾಗಿ ಈಜು ಬಲ್ಲವರೂ ಸಹ ಇದರಲ್ಲಿ ಮುಳುಗಿಹೋಗುವರು. ಅಹಂಕಾರದ ಕಂಬಳಿಯನ್ನು ಬದಿಗಿರಿಸಿ, ಗುರುಗಳ ಉಪದೇಶದಂತೆ ಮಹೇಶ್ವರನನ್ನು ಸದಾ ನೆನೆಯಬೇಕು. ಗುಣಾತೀತವಾದ ಟೊರಗೆಯಲ್ಲಿ ತೂಗುವ ತೊಟ್ಟಿಲಲ್ಲಿ ಮಗು ಮಲಗಿದೆ. ಅನಾಹುತದ ಗಿಲಗಿಟಿಕೆ ಬಾರಿಸಿದಾಗ ಅದು ನಿದ್ರೆಹೋಗಿದೆ. ಆ ನಿದ್ರೆ ಉನ್ಮನೀಯ ನಿದ್ರೆ. ಇನ್ನು ಸೋಹಂ ಸೋಹಂ ಎಂಬ ಛಂದವನ್ನು ಹಿಡಿದು ಜಾಗೃತಿ. ಸುಷುಪ್ತಿಗಳ ಆಚೆಗಿರುವ ಸಮಾಧಿ ಸುಖವನ್ನು ಅನುಭವಿಸು. ಹೆಂಡತಿಯ ಒಡಲಲ್ಲಿ ಗಂಡ ಜನ್ಮವೆತ್ತಿದ. ಅದರ ಹುಟ್ಟಿದಂದಿನಿಂದಲೇ ಗಂಡ ಹೆಂಡತಿಯನ್ನು ಕಾಣಲಿಲ್ಲ. ಇಂಥ ಗಂಡ ಯಾರಿಗೂ ಲಭಿಸ. ಚಂದನದ ಕಂಪಿನಿಂದ ಬನದ ಮರಗಳೆಲ್ಲ ಸುವಾಸಿತವಾಗುವಂತೆ ಶ್ರೀಹರಿಯನ್ನು ಸೇವಿಸುವುದರಿಂದ ಮಾನವ ಹರಿಮಯನಾಗುತ್ತಾನೆ ಎಂದು ಮುಕ್ತಬಾಯಿ ತನ್ನ ಅಭಂಗಗಳಲ್ಲಿ ಸಾರಿದ್ದಾಳೆ.					
(ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ